ಕೇಂಬ್ರಿಜ್ ಪಂಥ

ಪ್ರಸಿದ್ಧ ಇಂಗ್ಲಿಷ್ ಅರ್ಥವಿಜ್ಞಾನಿ ಆಲ್‍ಫ್ರೆಡ್ ಮಾರ್ಷಲ್ (1842-1924) ಮತ್ತು ಆತನ ಮುಖ್ಯ ಶಿಷ್ಯವರ್ಗದವರ ಬರೆಹಗಳ ಆಧಾರದ ಮೇಲೆ ರಚಿತವಾಗಿ ಇತರ ಅನೇಕ ಪಂಡಿತರಿಂದ ವಿಶದಗೊಂಡ ಆರ್ಥಿಕ ವಿಚಾರಧಾರೆ (ಕೇಂಬ್ರಿಜ್ ಸ್ಕೂಲ್). ನವ ಅಭಿಜಾತ ಪಂಥದ ಒಂದು ಶಾಖೆಯೆಂದೂ ಪರಿಗಣಿತವಾಗಿದೆ. ಇತರ ಪಂಥಗಳ ಅಭಿಪ್ರಾಯಗಳ ಸಮನ್ವಯ ಈ ಪಂಥದ ವೈಶಿಷ್ಟ್ಯ. ಇದು ಅಭಿಜಾತ ಪಂಥದ ಭಾವನೆಗಳನ್ನು ಬಹುಮಟ್ಟಿಗೆ ಅನುಸರಿಸುವುದಾದರೂ ಅವುಗಳ ಮಿತಿಗಳನ್ನು ಒತ್ತಿ ಹೇಳುತ್ತದೆ. ಹೀಗೆಯೇ ಅದು ಐತಿಹಾಸಿಕ ಪಂಥದ ಮಾರ್ಗಗಳನ್ನು ಅನುಸರಿಸುತ್ತದೆಯಾದರೂ ಆ ಮಾರ್ಗಗಳನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸುತ್ತದೆ. ಅಭಿಜಾತ ಪಂಥದ ವಾಸ್ತವ ವೆಚ್ಚ ಭಾವನೆಯನ್ನೂ ಆಸ್ಟ್ರಿಯನ್ ಪಂಥದ ಉಪಯುಕ್ತತೆಯ ಭಾವನೆಯನ್ನೂ ಅದು ತನ್ನ ವಿಶ್ಲೇಷಣೆಯಲ್ಲಿ ಉಪಯೋಗಿಸುತ್ತದೆ. ಆದರೆ ಇವುಗಳಲ್ಲಿ ಒಂದೊಂದೂ ಅಪೂರ್ಣ ಎಂಬ ಮುಖ್ಯಾಂಶವನ್ನು ಹಿಡಿದೆತ್ತಿ ಇವೆರಡರ ಸಮನ್ವಯದ ಮೇಲ್ಮೆಯನ್ನು ಸಾಧಿಸಿ ತೋರಿಸಿದೆ. ಅರ್ಥಶಾಸ್ತ್ರ ಅಧ್ಯಯನದಲ್ಲಿ ಗಣಿತಮಾರ್ಗ ಒಂದು ಬೌದ್ಧಿಕ ಸಾಧನವೆಂದು ಈ ಪಂಥ ಒಪ್ಪುವುದಾದರೂ ನಿರ್ದಿಷ್ಟ ಸಮಸ್ಯೆಗಳ ವಿಶ್ಲೇಷಣೆಯನ್ನು ವಾಸ್ತವಿಕ ಮಟ್ಟದಲ್ಲಿ ನಡೆಸುವುದರ ಪ್ರಾಮುಖ್ಯವನ್ನು ಇದು ಒತ್ತಿ ಹೇಳುತ್ತದೆ. ಹೀಗೆ ವಿವಿಧ ಪಂಥಗಳ ವಿಚಾರಧಾರೆಯ ವಿಮರ್ಶನಾತ್ಮಕ ಅಧ್ಯಯನದಿಂದ ಕೇಂಬ್ರಿಜ್ ಪಂಥ ಅನೇಕ ಆರ್ಥಿಕ ವಿಷಯಗಳ ಬಗ್ಗೆ ತನ್ನದೇ ಆದ ನಿಲುವನ್ನು ತಾಳಿದೆ. ಇದಕ್ಕೂ ಹೆಚ್ಚಾಗಿ ಈ ಪಂಥ ಮೌಲ್ಯ, ಹಣ, ವಿದೇಶಿ ವ್ಯಾಪಾರ, ಕ್ಷೇಮಾಭ್ಯುದಯ ಇತ್ಯಾದಿ ವಿಷಯಗಳ ಬಗ್ಗೆ ಹೊಸ ಭಾವನೆಗಳನ್ನೂ ಸಿದ್ಧಾಂತಗಳನ್ನೂ ರೂಪಿಸಿದೆ. ಕೆಂಬ್ರಿಜ್ ಪಂಥದ ಅರ್ಥಶಾಸ್ತ್ರಜ್ಞರು ಯಾವುದೇ ಆರ್ಥಿಕ ಸಿದ್ಧಾಂತ ಅಥವಾ ಭಾವನೆಗೂ ಕೇವಲ ಅಂಧಾಭಿಮಾನದಿಂದ ಅಂಟಿಕೊಂಡಿರದೆ, ಇವನ್ನು ಹೊಸ ಅನುಭವದ ಹಾಗೂ ಆರ್ಥಶಾಸ್ತ್ರದ ಬೆಳವಣಿಗೆಯ ದೃಷ್ಟಿಯಲ್ಲಿ ಸತತವೂ ಪುನರ್ವಿಮರ್ಶಿಸುವ ವೈಚಾರಿಕ ದೃಷ್ಟಿಯುಳ್ಳ ಶೀಲವಂತ ಶಾಸ್ತ್ರಜ್ಞರಾಗಿದ್ದಾರೆ.

	ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿದ್ದು ಸೇವೆ ಸಲ್ಲಿಸಿದ ಆಲ್‍ಫ್ರೆಡ್ ಮಾರ್ಷಲನ ನೇರವಾದ ಪ್ರಭಾವÀಕ್ಕೆ ಒಳಗಾಗಿ ಬೆಳೆದ ಕೇಂಬ್ರಿಜ್ ಪಂಥದ ಅರ್ಥಶಾಸ್ತ್ರಜ್ಞರಲ್ಲಿ ಆರ್ಥರ್, ಸಿ.ಪಿಗು, ಜೋನ್ ರಾಬಿನ್ಸನ್, ಡೆನಿಸ್ ಹೆಚ್. ರಾಬರ್ಟ್‍ಸನ್, ಮಾರಿಸ್ ಡಾಬ್, ಪಿಯರೋ ಸ್ರಾಫ ಮತ್ತು ಜಾನ್ ಮೇನರ್ಡ್ ಕೇನ್ಸ್ ಇವರು ಅಗ್ರಗಣ್ಯರೆಂದು ಹೇಳಬಹುದು. ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಮಾರ್ಷಲ್ ಸೇರಿದಾಗ ಅರ್ಥಶಾಸ್ತ್ರ ಸ್ವತಂತ್ರವಿಭಾಗವಾಗಿರಲಿಲ್ಲ; ನೀತಿ ವಿಜ್ಞಾನ ಹಾಗೂ ಇತಿಹಾಸಗಳೊಳಗೆ ಸೇರಿದ್ದ ಅಧ್ಯಯನ ವಿಭಾಗವಾಗಿತ್ತು. ಈತ ಅಲ್ಲಿ ಅರ್ಥಶಾಸ್ತ್ರಕ್ಕೆ ಪ್ರತ್ಯೇಕ ಸ್ಥಾನ ದೊರಕಿಸಿಕೊಟ್ಟನಲ್ಲದೆ, ತನ್ನದೇ ಆದ ವಿಶಾಲವಾದ ಮತ್ತು ಆಳವಾದ ಅಧ್ಯಯನದ ಮೂಲಕ ಅರ್ಥಶಾಸ್ತ್ರಕ್ಕೆ ಹೊಸ ರೂಪ ಕೊಟ್ಟ. ಅರ್ಥಶಾಸ್ತ್ರ ಕೇವಲ ಸಂಪತ್ತಿನ ಶಾಸ್ತ್ರವಲ್ಲ; ಮಾನವನ ಅಧ್ಯಯನವೂ ಹೌದು. ಇದು ಮಾನವನ ಸಾಮಾಜಿಕ ಜೀವನದ ಒಂದು ಅಂಗವನ್ನು ಅಭ್ಯಸಿಸುವ ಶಾಸ್ತ್ರ; ಈ ಶಾಸ್ತ್ರದಲ್ಲಿ ನಿಗಮನ ಮತ್ತು ಅನುಗಮನ ತರ್ಕವಿಧಾನಗಳೆರಡಕ್ಕೂ ಅವಕಾಶವಿದೆ-ಎಂಬ ಅಂಶಗಳನ್ನು ಮಾರ್ಷಲ್ ಒತ್ತಿ ಹೇಳಿದ. ಸ್ವತ: ಪ್ರತಿಭಾವಂತ ಗಣಿತಜ್ಞನಾಗಿದ್ದರೂ ಆರ್ಥಿಕ ಸಿದ್ಧಾಂತವನ್ನು ಅತಿಯಾಗಿ ಗಣಿತಶಾಸ್ತ್ರದ ಕಡೆಗೆ ಒಯ್ಯದೆ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಹಾಯಕವಾಗುವಂತೆ ಅರ್ಥಶಾಸ್ತ್ರವನ್ನು ಬಳಸಬೇಕೆಂಬ ಹೆಗ್ಗುರಿ ಆತನದಾಗಿತ್ತು. ಅರ್ಥಶಾಸ್ತ್ರದ ಅಧ್ಯಯನದ ಪರಮಗುರಿ ಸಮಾಜದ ಆರ್ಥಿಕ ಕಲ್ಯಾಣ ಸಾಧನೆ ಎಂಬುದು ಆತನ ನಂಬಿಕೆ. ಈ ಧೋರಣೆ ಕೇಂಬ್ರಿಜ್ ಪಂಥದ ಒಂದು ಮುಖ್ಯ ಲಕ್ಷಣ. ಅದು ಪ್ರತಿಪಾದಿಸಿರುವ ಶುದ್ಧ ಸಿದ್ಧಾಂತ ವಿಭಾಗದಲ್ಲಿ ಕೂಡ ಈ ಮಾನವ ದೃಷ್ಟಿ ಇರುವುದು ಕಂಡುಬರುತ್ತದೆ.

	ಮಾರ್ಷಲನ ಕೃತಿಯಲ್ಲಿ ಮೌಲ್ಯ ಸಿದ್ಧಾಂತ ಹೊಸರೂಪ ತಾಳಿತು. ಆರ್ಥಿಕ ಸಮತೋಲನದ ರಚನೆಯ ಆಧಾರದ ಮೇಲೆ ಆತ ಮೌಲ್ಯ ವಿಶ್ಲೇಷಣೆ ಮಾಡಿದ್ದಾನೆ. ಆದರೆ, ಲಾಸೇನ್ ಪಂಥದ ಸಾರ್ವತ್ರಿಕ (ಜನರಲ್) ಸಮತೋಲನವನ್ನು ಅನುಸರಿಸದೆ ಕ್ಷೇತ್ರ (ಪರ್ಟಿಕ್ಯುಲರ್) ಸಮತೋಲನದ ರಚನೆಯನ್ನು ಆತ ಆಧಾರವಾಗಿಟ್ಟುಕೊಂಡ. ಇತರ ಸರಕುಗಳ ಬೆಲೆಗಳು ನಿರ್ದಿಷ್ಟಮಟ್ಟಗಳಲ್ಲಿವೆ ಎಂಬ ಊಹೆಯ ಆಧಾರದ ಮೇಲೆ ಒಂದು ಸರಕಿನ ಬೆಲೆಯ ನಿರ್ಣಯಾಂಶಗಳ ವಿಶ್ಲೇಷಣೆಯನ್ನು ಆತನ ಬೆಲೆ ಸಿದ್ಧಾಂತ ಒಳಗೊಂಡಿದೆ. ಈ ಒಂದು ಸರಕಿನ ಬೇಡಿಕೆ ಮತ್ತು ಸರಬರಾಯಿ ಪಟ್ಟಿಗಳನ್ನು (ಷೆಡ್ಯೂಲ್) ರಚಿಸಿ ಇವೆರಡರ ಸಂಬಂಧಗಳನ್ನು ವಿವೇಚಿಸಿ ಬೇಡಿಕೆ ಸರಬರಾಯಿಗಳ ಸಮತೋಲನ ಬಿಂದುವಿನ ಪ್ರಾಮುಖ್ಯವನ್ನು ತೋರಿಸಿದ್ದಾನೆ. ಅಂಚಿನ ಉಪಯುಕ್ತತೆಯ ಮೂಲಕ ಬೇಡಿಕೆಯೂ ಅಂಚಿನ ವೆಚ್ಚದ ಮೂಲಕ ಸರಬರಾಯಿಯು ಯಾವುದೇ ಒಂದು ಸರಕಿನ ಬೆಲೆಯನ್ನು ನಿರ್ಣಯಿಸುವ ಅಂಶಗಳಾಗಿವೆ. ಈ ವಿಷಯವನ್ನು ಕತ್ತರಿಯ ಉದಾಹರಣೆಯ ಮೂಲಕ ಮಾರ್ಷಲ್ ಸ್ಪಷ್ಟಪಡಿಸಿದ್ದಾನೆ. ಸರಬರಾಯಿ ಮತ್ತು ಬೇಡಿಕೆಗಳು ಕತ್ತರಿಯ ಅಲಗುಗಳಿದ್ದಂತೆ. ಕಾಗದದ ಚೂರೊಂದನ್ನು ಕತ್ತರಿಸುವಾಗ ಎರಡು ಅಲಗುಗಳೂ ಹೇಗೆ ಪಾತ್ರವಹಿಸುವುವೋ ಹಾಗೆಯೇ ಬೆಲೆ ನಿರ್ಣಯದಲ್ಲಿ ಬೇಡಿಕೆ ಸರಬರಾಯಿಗಳೆರಡರ ಪಾತ್ರವೂ ಆವಶ್ಯಕ. ಕೆಲವು ಸಂದರ್ಭಗಳಲ್ಲಿ ಸರಬರಾಯಿಯ ಅಲಗು ಅಚಲವಾಗಿದ್ದು, ಮುಖ್ಯವಾಗಿ ಬೇಡಿಕೆಯ ಅಲಗಿನ ಚಲನೆಯಿಂದ ಬೆಲೆ ನಿರ್ಣಯವಾಗುವುದಾದರೆ, ಇತರ ಸಂದರ್ಭಗಳಲ್ಲಿ ಬೇಡಿಕೆ ಸರಬರಾಯಿಗಳ ಅಲಗುಗಳೆರಡೂ ಚಲಿಸಿ ಬೆಲೆ ನಿರ್ಣಯಿಸುತ್ತವೆ. ಈ ಸಂದರ್ಭಗಳ ವಿವರಣೆಯನ್ನು ಮಾರ್ಷಲ್ ತನ್ನದೇ ಆದ ಕಾಲ ವಿಭಾಗಗಳ ವಿಂಗಡಣೆಯ ಮೂಲಕ ನೀಡಿದ್ದಾನೆ.

	ಸಮತೋಲನವನ್ನು ನಿರ್ಮಿಸುವ ಸರಬರಾಯಿ-ಬೇಡಿಕೆ ಶಕ್ತಿಗಳು ನಾಲ್ಕು ಕಾಲಾವಧಿಗಳಲ್ಲಿ ವಿವಿಧ ರೀತಿಯಲ್ಲಿ ಕ್ರಿಯಾತ್ಮಕವಾಗುತ್ತವೆ. ತುಂಬ ಅಲ್ಪಕಾಲಾವಧಿಯಲ್ಲಿ ಸರಬರಾಯಿ ಸ್ಥಿರವಾಗಿದ್ದಾಗ ಬೆಲೆಯ ನಿರ್ಧಾರದಲ್ಲಿ ಬೇಡಿಕೆ ಪ್ರಧಾನಪಾತ್ರ ವಹಿಸುತ್ತದೆ. ಅಲ್ಪ ಕಾಲಾವಧಿಯಲ್ಲಿ ಪ್ರಸ್ತುತ ಇರುವ ಯಂತ್ರೋಪಕರಣಗಳ ಉಪಯೋಗದಿಂದ ಸಾಧ್ಯವಾಗುವಷ್ಟು ಮಟ್ಟಿಗೆ ಉತ್ಪಾದನೆ ಹಾಗೂ ಸರಬರಾಯಿಯನ್ನು ಅಧಿಕಗೊಳಿಸಲು ಅವಕಾಶವಿರುತ್ತದೆ. ದೀರ್ಘಕಾಲಾವಧಿಯಲ್ಲಿ ಸರಬರಾಯಿಯನ್ನು ಹೆಚ್ಚಿಸಲು ಹೊಸ ಯಂತ್ರೋಪಕರಣಗಳೂ ಉತ್ಪಾದನ ಘಟಕಗಳ ನಿರ್ಮಾಣಕ್ಕೆ ಬೇಕಾಗುವಷ್ಟು ಕಾಲಾವಕಾಶವೂ ಇರುವುವೆಂದು ಊಹಿಸಲಾಗಿದೆ. ಅತಿ ದೀರ್ಘ ಕಾಲಾವಧಿಯಲ್ಲಿ ಜನಸಂಖ್ಯೆ, ತಾಂತ್ರಿಕಜ್ಞಾನ, ಜನರ ಅಭಿರುಚಿ, ಉತ್ಪಾದನ ವ್ಯವಸ್ಥೆ ಇತ್ಯಾದಿಗಳಲ್ಲಿ ಆಗುವ ಬದಲಾವಣೆಗಳಿಂದ ಬೇಡಿಕೆ-ಸರಬರಾಯಿ ಶಕ್ತಿಗಳು ಪ್ರಭಾವಿತವಾಗುತ್ತವೆ. ಹೀಗೆ ಆರ್ಥಿಕ ವಿಶ್ಲೇಷಣೆಯಲ್ಲಿ ಕಾಲ ಮಹತ್ತ್ವದ ಅಂಶ ಎಂಬುದನ್ನು ಮಾರ್ಷಲ್ ಒತ್ತಿ ಹೇಳಿದ. ಇದು ಅರ್ಥಶಾಸ್ತ್ರಕ್ಕೆ ಕೇಂಬ್ರಿಜ್ ಪಂಥ ನೀಡಿದ ಮುಖ್ಯ ಕಾಣಿಕೆ.

	ಮಾರ್ಷಲನ ವಿತರಣಸಿದ್ಧಾಂತ ನಿರೂಪಣೆಯಲ್ಲಿ ಅಭಿಜಾತ ಪರಂಪರೆಯ ಗುರುತುಗಳು ಎದ್ದು ಕಾಣುತ್ತವೆ. ಉತ್ಪಾದನಾಂಗವಾದ ಪ್ರಾಕೃತಿಕ ಸಂಪತ್ತಿನ ಪ್ರತಿಫಲ ಬಿನ್ನಕ ಹೆಚ್ಚುವರಿ (ಡಿಫರೆನ್ಷಿಯಲ್ ಸಪ್ರ್ಲಸ್) ಎಂಬ, ಡೇವಿಡ್ ರಿಕಾರ್ಡೋನ ಭಾವನೆಯನ್ನು ಮಾರ್ಷಲ್ ಹೆಚ್ಚು ವ್ಯಾಪಕವಾಗಿ ಅನ್ವಯಿಸಿದ್ದಾನೆ. ಉತ್ತಮ ಜಮೀನಿಗೂ ಪರಿಸರದ ಜಮೀನಿಗೂ ಇರುವ ಭಿನ್ನಕ ಹೆಚ್ಚುವರಿಯನ್ನು ಭೂಗೇಣಿ ಎಂದು ಅಭಿಜಾತ ಪಂಥ ಪರಿಗಣಿಸಿತ್ತು. ಇದೇ ಬಗೆಯ ಹೆಚ್ಚುವರಿಯ ಅಂಶ ಇತರ ಉತ್ಪಾದನಾಂಗಗಳ ಪ್ರತಿಫಲಗಳಾದ ಕೂಲಿ, ಬಡ್ಡಿ ಮತ್ತು ಲಾಭಗಳಲ್ಲೂ ಇರುವುದೆಂದು ಮಾರ್ಷಲ್ ತೋರಿಸಿಕೊಟ್ಟ. ಇದರಿಂದಾಗಿ ಅನುಭೋಗಿಯ ಹೆಚ್ಚುವರಿ ಇರುವಂತೆ ಉತ್ಪಾದಕನ ಹೆಚ್ಚುವರಿಯೂ ಇರುವುದುಂಟೆಂದು ಆತ ಹೇಳಿದ್ದಾನೆ. ಈ ಬಗೆಯ ಹೆಚ್ಚುವರಿಯ ಕಾರಣದ ವಿಶ್ಲೇಷಣೆಯಲ್ಲೂ ಮೌಲ್ಯ ಸಿದ್ಧಾಂತದ ವಿವರಣೆಯಲ್ಲಿರುವಂತೆಯೇ ಕಾಲದ ಪ್ರಾಮುಖ್ಯವನ್ನು ಒತ್ತಿ ಹೇಳಿದ್ದಾನೆ. ಅಲ್ಪ ಅವಧಿಯಲ್ಲಿ ಸ್ಥಿರ ಬಂಡವಾಳವನ್ನೂ, ಹೆಚ್ಚು ದಕ್ಷ ಉದ್ಯಮಿಗಳನ್ನೂ ಹೆಚ್ಚಿಸಲಾಗದುದರಿಂದ ಈ ಉತ್ಪಾದನಾಂಗಗಳಿಗೂ ಈ ವಿಚಾರದಲ್ಲಿ ಭೂಮಿಯ ಗುಣಗಳೇ ಇರುತ್ತವೆ. ಆದ್ದರಿಂದ ಇವಕ್ಕೆ ಕೂಡ ಅಲ್ಪ ಅವಧಿಯಲ್ಲಿ ಗೇಣಿಯ ಸ್ವಭಾವದ ಭಿನ್ನಕ ಹೆಚ್ಚುವರಿ-ಎಂದರೆ ಉತ್ತಮ ಅಂಚಿನ ಘಟಕಗಳ ಪ್ರತಿಫಲಗಳ ನಡುವಣ ವ್ಯತ್ಯಾಸಕ್ಕೆ ಸಮಾನವಾದ ಹೆಚ್ಚುವರಿ-ಲಭ್ಯವಾಗುತ್ತದೆ. ದೀರ್ಘ ಅವಧಿಯಲ್ಲಿ ಈ ಉತ್ಪಾದನಾಂಗಗಳ ಸರಬರಾಯಿಯನ್ನು ಹೆಚ್ಚಿಸಲು ಸಾಧ್ಯವಾಗುವುದರಿಂದ ಈ ಭಿನ್ನಕ ಹೆಚ್ಚುವರಿಯ ಅಂಶ ಮಾಯವಾಗುತ್ತದೆ. ಆದರೆ ಗೇಣಿ ಮಾತ್ರ ದೀರ್ಘ ಅವಧಿಯಲ್ಲೂ ಭಿನ್ನಕ ಹೆಚ್ಚುವರಿಯೇ ಆಗಿರುತ್ತದೆ. ಈ ಭಿನ್ನತೆಯನ್ನು ತೋರಿಸಲಿಕ್ಕಾಗಿ ಸ್ಥಿರ ಬಂಡವಾಳಕ್ಕೆ ಅಲ್ಪ ಕಾಲಾವಧಿಯಲ್ಲಿ ಸಿಗಬಹುದಾದ ಭಿನ್ನಕ ಹೆಚ್ಚುವರಿ ಅಂಶಕ್ಕೆ ಅರೆಗೇಣಿ ಎಂಬ ಪದವನ್ನು ಮಾರ್ಷಲ್ ಉಪಯೋಗಿಸಿದ್ದಾನೆ.

	ಇಳಿಮುಖ ಮತ್ತು ಏರುಮುಖ ಪ್ರತಿಫಲ ನಿಯಮಗಳನ್ನು ಆಂತರಿಕ ಮಿತವ್ಯಯಾಂಶಗಳು, ಬಾಹ್ಯ ಮಿತವ್ಯಯಾಂಶಗಳೆಂಬ ಭಾವನೆಗಳ ಮೂಲಕ ವಿಶದಪಡಿಸಿರುವುದು ಅರ್ಥಶಾಸ್ತ್ರಕ್ಕೆ ಮಾರ್ಷಲ್ ನೀಡಿದ ಇನ್ನೊಂದು ಮುಖ್ಯ ವಿಶ್ಲೇಷಣ ಮಾರ್ಗವಾಗಿದೆ.

	ಅಂತರರಾಷ್ಟ್ರೀಯ ಮೌಲ್ಯವಿಭಾಗದಲ್ಲಿ ಮಾರ್ಷಲ್ ಪುಟಿತತೆಯ ಆಧಾರದ ಮೇಲೆ ಪರಸ್ಪರ ಬೇಡಿಕೆ ಹಾಗೂ ಸರಬರಾಯಿ ರೇಖೆಗಳ ಭಾವನೆಗಳನ್ನೂ ಸೃಜಿಸಿದ. ರಿಕಾರ್ಡೋವಿನ ಕೊಳ್ಳುವ ಶಕ್ತಿ ಸಮಾನತೆ ಸಿದ್ಧಾಂತವನ್ನೂ, ವಿದೇಶಿ ವಿನಿಮಯಗಳ ಸಂಬಂಧದಲ್ಲಿ ಚಿನ್ನದ ಅಂತರರಾಷ್ಟ್ರೀಯ ಪರ್ಯಟನ ಕುರಿತ ತತ್ತ್ವಗಳನ್ನೂ ಹಣ ವ್ಯವಸ್ಥೆ ಕುರಿತ ಅಂದಿನ ಅನೇಕ ಭಾವನೆಗಳನ್ನೂ ಆತ ಪುನರ್ರಚಿಸಿದ. ಹೀಗೆ ಅರ್ಥಶಾಸ್ತ್ರದ ವಿವಿಧ ವಿಭಾಗಗಳಲ್ಲಿ ಆರ್ಥಿಕ ವಿಶ್ಲೇಷಣೆಗೆ ಸಹಾಯಕವಾಗುವ ಅನೇಕ ಸಾಧನೆಗಳನ್ನು ಮಾರ್ಷಲ್ ಸೃಷ್ಟಿಸಿದ್ದಾನೆ. ಮಾರ್ಷಲನ ತರುವಾಯ ಆತನ ಪರಂಪರೆಯಲ್ಲಿ ಅರ್ಥಶಾಸ್ತ್ರವನ್ನು ಬೆಳೆಸಿದ ಕೇಂಬ್ರಿಜ್ ಪಂಥದ ಮೇಧಾವಿಗಳು ಇವನ್ನೂ ಇನ್ನೂ ಇತರ ವಿಭಾಗಗಳನ್ನೂ ಫಲವತ್ತಾಗುವಂತೆ ಬೆಳೆಸಿಕೊಂಡು ಬಂದಿದ್ದಾರೆ. ಪಿಗು ಸುಖೀ ಅರ್ಥಶಾಸ್ತ್ರವನ್ನೂ ಪಿಗು, ರಾಬರ್ಟ್‍ಸನ್ ಮತ್ತು ಕೇನ್ಸ್ ಆರ್ಥಿಕ ಆವರ್ತಗಳನ್ನೂ ಜೋನ್ ರಾಬಿನ್ಸನ್ ಮತ್ತು ಪಿಯರೋ ಸ್ರಾಫ ಅಪರಿಪೂರ್ಣ ಸ್ಫರ್ಧೆಯ ಸಿದ್ಧಾಂತವನ್ನೂ ಕುರಿತ ವಿಶೇಷ ಅಧ್ಯಯನ ಮಾಡಿದ್ದಾರೆ. ಕೇಂಬ್ರಿಜ್ ಪಂಥದಲ್ಲೇ ಅಲ್ಲದೆ ಇಡೀ ಅರ್ಥಶಾಸ್ತ್ರ ಪ್ರಪಂಚದಲ್ಲೇ ಅತ್ಯಂತ ಶೋಭಾಯಮಾನ ಸ್ಥಾನ ಹೊಂದಿರುವ ಕೇನ್ಸನ ಉದ್ಗ್ರಂಥಗಳು ಅರ್ಥಶಾಸ್ತ್ರ ಅಧ್ಯಯನಕ್ಕೆ ಹೊಸ ದೃಷ್ಟಿಯನ್ನೇ ನೀಡಿವೆ.

	ಹಣದ ಮೌಲ್ಯ ಮೀಮಾಂಸೆಯ ಬಗ್ಗೆ ಕೇಂಬ್ರಿಜ್ ಪಂಥ ತನ್ನದೇ ಆದ ದೃಷ್ಟಿ ಕೋನವನ್ನು ಅನುಸರಿಸಿ ಹೊಸ ಭಾವನೆಗಳನ್ನು ಅರ್ಥಶಾಸ್ತ್ರಕ್ಕೆ ನೀಡಿತು. ಪ್ರೊ. ಆರ್ವಿಂಗ್ ಫಿಷರನ ಪರಿಮಾಣಸಿದ್ಧಾಂತದ ಸಮೀಕರಣಕ್ಕೆ ಪ್ರತಿಯಾಗಿ ಕೇಂಬ್ರಿಜ್ ಪಂಥ ಪ್ರತ್ಯೇಕವಾದ ಸಮೀಕರಣವನ್ನು ರಚಿಸಿತು. ಪ್ರತಿ ವ್ಯಕ್ತಿಯೂ ತನ್ನ ವರಮಾನದ ಒಂದು ಭಾಗವನ್ನು ಸರಕು ಸೇವೆಗಳನ್ನು ಕೊಳ್ಳುವ ಇಚ್ಛೆಯಿಂದ ನಗದಿನ ರೂಪದಲ್ಲಿ ಇಟ್ಟುಕೊಳ್ಳಬಯಸುತ್ತಾನೆ. ಜನಾಂಗದ ವ್ಯಕ್ತಿಗಳೆಲ್ಲ ಸೇರಿ ಹೀಗೆ ಇಟ್ಟುಕೊಳ್ಳಬಯಸುವ ನಗದಿನ ಪ್ರಮಾಣವೇ ಹಣಕ್ಕೆ ಜನಾಂಗದಲ್ಲಿರುವ ಒಟ್ಟು ಬೇಡಿಕೆ. ಈ ಹಣದ ಬೇಡಿಕೆಯಲ್ಲೂ ಸರಬರಾಯಿಯಲ್ಲೂ ಆಗುವ ಬದಲಾವಣೆಗಳು ಬೆಲೆಗಳ ಮಟ್ಟ ನಿರ್ಣಯಿಸುವುದರಲ್ಲಿ ಸಮಾನ ಪ್ರಾಮುಖ್ಯ ಪಡೆದಿವೆ ಎಂಬುದು ಪರಿಮಾಣ ಸಿದ್ಧಾಂತ ಕುರಿತ ಕೇಂಬ್ರಿಜ್ ಸಮೀಕರಣದ ಸಾರಾಂಶ. ಜಿ.ಎಮ್.ಕೇನ್ಸ್ ತನ್ನ ಎ ಟ್ರೀಟೈಸ್ ಆನ್ ಮನಿ ಎಂಬ ಗ್ರಂಥದಲ್ಲಿ ಇದೇ ವಿಷಯದಲ್ಲಿ ಮೂಲಭೂತ ಸಮೀಕರಣಗಳು ಎಂದು ಕರೆಯಲಾದ ಹೊಸ ಸಮೀಕರಣಗಳನ್ನು ರಚಿಸಿದ. ಬೆಲೆಗಳ ಮಟ್ಟದ ನಿರ್ಣಯದಲ್ಲಿ ಉಳಿತಾಯ-ಹೂಟಿಗಳ ಪರಸ್ಪರ ಸಂಬಂಧ ಮುಖ್ಯ ಅಂಶವೆಂಬೂದೂ ಉಳಿತಾಯ ಮತ್ತು ಹೂಟಿಗಳು ಬಹಳಮಟ್ಟಿಗೆ ಕೇಂದ್ರ ಬ್ಯಾಂಕಿನ ಕ್ರಿಯೆಗಳಿಂದ ಪ್ರಭಾವಿತವಾಗಬಲ್ಲುವೆಂಬುದೂ ಕೇನ್ಸನ ಈ ಸಮೀಕರಣಗಳ ಹಿಂದೆ ಅಡಗಿರುವ ಮುಖ್ಯ ಭಾವನೆಗಳು. ಕೇಂಬ್ರಿಜ್ ಪಂಥದ ಈ ದೃಷ್ಟಿಕೋನ ಹಣದ ಮೌಲ್ಯ ಕುರಿತ ಮೀಮಾಂಸೆಯ ಅಧ್ಯಯನದಲ್ಲಿ ವಿಶೇಷ ಮಾನ್ಯತೆ ಗಳಿಸಿದೆ.

	ಮಾರ್ಷಲನ ಶಿಷ್ಯವರ್ಗಕ್ಕೆ ಸೇರಿದ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಪೀಠವನ್ನಲಂಕರಿಸಿದ ಇಟಲಿಯ ಪಿಯರೋ ಸ್ರಾಫ ಮತ್ತು ಜೋನ್ ರಾಬಿನ್ಸನ್‍ಗಳು ಅಪರಿಪೂರ್ಣ ಸ್ಫರ್ಧೆಯ ಆಧುನಿಕ ಸಿದ್ಧಾಂತದ ಬೆಳವಣಿಗೆಗೆ ಬಹುಮಟ್ಟಿಗೆ ಕಾರಣರಾಗಿದ್ದಾರೆ. ಪಿಯರೋ ಸ್ರಾಫ 1926ರಲ್ಲಿ ಪ್ರಕಟಿಸಿದ ಲೇಖನ ಈ ಸಿದ್ಧಾಂತದ ಚರ್ಚೆಗೆ ಆದಿಯಾಯಿತು. 1934ರಲ್ಲಿ ಜೋನ್ ರಾಬಿನ್ಸನ್ ಪ್ರಕಟಿಸಿದ ದಿ ಎಕನಾಮಿಕ್ಸ್ ಆಫ್ ಇಂಪರ್ಫೆಕ್ಟ್ ಕಾಂಪಿಟೇಷನ್ ಎಂಬ ಗ್ರಂಥ ಈ ವಿಷಯದ ವಿಸ್ತøತ ನಿರೂಪಣೆಯಾಯಿತು. ಈ ಅಧ್ಯಯನಗಳು ಮೌಲ್ಯ ಮತ್ತು ವಿತರಣ ಸಿದ್ಧಾಂತಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿದುವು.

	19ನೆಯ ಶತಮಾನದ ವ್ಯಕ್ತಿ ಸ್ವಾತಂತ್ರ್ಯ ತತ್ತ್ವವನ್ನೂ ವ್ಯಕ್ತಿಗಳ ಉದ್ಯಮಶೀಲತೆಯ ಕ್ರಿಯಾಶಕ್ತಿಯನ್ನೂ ಆರ್ಥಿಕ ರಂಗದಲ್ಲಿ ಸ್ಫರ್ಧಾಶಕ್ತಿಯ ಗುಣ ವಿಶೇಷವನ್ನೂ ಕೇಂಬ್ರಿಜ್ ಪಂಥ ಎತ್ತಿ ಹಿಡಿಯುವುದಾದರೂ ಇಂಥ ಖಾಸಗಿ ವ್ಯಕ್ತಿ ಸ್ವಾತಂತ್ರ್ಯ ಪದ್ಧತಿಯ ಇತಿಮಿತಿಗಳನ್ನೂ ಅದು ಸ್ಪಷ್ಟಗೊಳಿಸಿತು. ಮಾರ್ಷಲನೇ ಶುದ್ಧ ಬಂಡವಾಳ ಪದ್ಧತಿಯ ಇತಿಮಿತಿಗಳನ್ನು ಒತ್ತಿ ಹೇಳಿದ್ದ. ಆದರೆ, ವ್ಯಕ್ತಿಯ ಆರ್ಥಿಕ ಸ್ವಾತಂತ್ರ್ಯ ಪದ್ಧತಿಯ ಬಗ್ಗೆ 19ನೆಯ ಶತಮಾನದಲ್ಲಿ ಇದ್ದ ನಂಬಿಕೆಯನ್ನು ಪ್ರಶ್ನಿಸಿ ಅದರ ಬಗ್ಗೆ ಇದ್ದ ಧೋರಣೆಯಲ್ಲಿ ತೀವ್ರ ಮಾರ್ಪಾಡು ಉಂಟು ಮಾಡಿದವರು ಮುಖ್ಯವಾಗಿ ಮಾರ್ಷಲನ ತರುವಾಯ ಬಂದ ಪಿಗು ಮತ್ತು ಕೇನ್ಸ್.

	ಪಿಗುವಿನ ಅಧ್ಯಯನದ ಫಲವಾಗಿ ಯೋಗಕ್ಷೇಮ ಅಥವಾ ಸುಖೀ ಅರ್ಥಶಾಸ್ತ್ರ ಎಂಬ ಹೊಸ ಅರ್ಥಶಾಸ್ತ್ರವಿಭಾಗವೇ ಬೆಳೆದಂತಾಯಿತು. ಮಾರ್ಷಲ್ ನಿರೂಪಿಸಿದ್ದ ಕ್ಷೇಮ ಸೂತ್ರಗಳು, ಉಪಯುಕ್ತತೆ ನಿಯಮಗಳು, ಅನುಭೋಗಿ ಹೆಚ್ಚುವರಿ ಇತ್ಯಾದಿ ವಿಷಯಗಳ ಆಧಾರದ ಮೇಲೆ ಆರ್ಥಿಕ ಯೋಗಕ್ಷೇಮ ಕುರಿತ ಉದ್ಗ್ರಂಥವನ್ನು ಪಿಗು ರಚಿಸಿದ. ಆತನ ವೆಲ್ಫೇರ್ ಎಕನಾಮಿಕ್ಸ್ (ಸುಖೀ ಅರ್ಥಶಾಸ್ತ್ರ) ಕೇಂಬ್ರಿಜ್ ಪಂಥದಲ್ಲಿ, ಮಾರ್ಷಲನ ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್ ಗ್ರಂಥದ ಅನಂತರ ರಚಿತವಾದ, ಎರಡನೆಯ ಮೇರುಕೃತಿಯಾಗಿದೆ. ಯಾವುದೇ ಸಮುದಾಯದ ಸೌಖ್ಯದ ಮಟ್ಟ ರಾಷ್ಟ್ರೀಯ ವರಮಾನ, ಅದು ಜನಸಾಮಾನ್ಯರಲ್ಲಿ ವಿತರಣೆಯಾಗಿರುವ ಪ್ರಮಾಣ ಇವನ್ನು ಅವಲಂಬಿಸಿದೆಯೆಂಬುದು ಪಿಗುವಿನ ಅಭಿಪ್ರಾಯ. ಅಂದಮೇಲೆ, ರಾಷ್ಟ್ರೀಯ ವರಮಾನ ಹಾಗೂ ವಿತರಣೆಗಳ ಮೂಲಕ ಆರ್ಥಿಕ ಶಕ್ತಿಗಳು ಸಮುದಾಯದ ಕಲ್ಯಾಣದ ಮೇಲೆ ಪ್ರಭಾವಕಾರಕವಾಗಿರುತ್ತವೆ, ಎಂದಂತಾಯಿತು. ಸಮುದಾಯದ ಸೌಖ್ಯದ ಮಟ್ಟ ಗರಿಷ್ಠವಾಗುವಂತೆ ಆರ್ಥಿಕಶಕ್ತಿಗಳನ್ನು ರೂಢಿಸುವುದೇ ಆ ರಾಷ್ಟ್ರೀಯ ಸಂಪತ್ತಿನ ಆದರ್ಶ ಉಪಯೋಗ ಎಂಬುದು ಆತನ ಅಭಿಪ್ರಾಯ. ರಾಷ್ಟ್ರೀಯ ಸಂಪತ್ತಿನ ವಾಸ್ತವ ಉಪಯೋಗ ಆದರ್ಶ ಉಪಯೋಗಕ್ಕಿಂತ ಎಷ್ಟು ಮಟ್ಟಿಗೆ ಕಡಿಮೆ ಮಟ್ಟದಲ್ಲಿದೆ ಎಂಬುದನ್ನು ಅರಿಯಲು ವ್ಯಕ್ತಿಯ ನಿವ್ವಳ ಉತ್ಪನ್ನ, ಸಾಮಾಜಿಕ ನಿವ್ವಳ ಉತ್ಪನ್ನ ಎಂಬ ಎರಡು ಭಾವನೆಗಳನ್ನು ಆತ ಸೃಜಿಸಿದ್ದಾನೆ. ಈ ಎರಡು ಉತ್ಪನ್ನ ಮಟ್ಟಗಳೂ ಸಮನಾಗಿರುವ ಸ್ಥಿತಿಯಲ್ಲಿ ಸಮುದಾಯದ ಕಲ್ಯಾಣ ಗರಿಷ್ಠವಾಗಿರುತ್ತದೆ. ಇತರ ಪರಿಸ್ಥಿತಿಗಳು ಏಕರೀತಿ ಇರುವುದಾದರೆ, ನಿರ್ದಿಷ್ಟ ಪರಿಮಾಣದ ಸಂಪತ್ತು ಹೆಚ್ಚು ಸಮಾನವಾಗಿ ಹಂಚಿಕೆಯಾದರೆ ಇದರಿಂದ ಸಮುದಾಯದ ಕಲ್ಯಾಣ ಹೆಚ್ಚು ಸಾಧಿತವಾಗುತ್ತದೆ. ಉತ್ಪನ್ನ ಸಾಧನಗಳನ್ನು ವಿವಿಧ ಉತ್ಪಾದನಾಶಾಖೆಗಳಲ್ಲಿ ವಿತರಣೆ ಮಾಡುವಾಗ ಈ ವಿವಿಧ ಶಾಖೆಗಳಲ್ಲಿ ಅಂಚಿನ ಘಟಕಗಳ ಸಾಮಾಜಿಕ ಉತ್ಪನ್ನ ಸಮಾನವಾಗಿರುವಂತೆ ವಿತರಣೆ ಮಾಡಿದರೆ ಸಂಪತ್ತಿನ ಉತ್ಪಾದನೆಯೂ ಗರಿಷ್ಠಮಟ್ಟದಲ್ಲಿರುತ್ತದೆ. ವಾಸ್ತವ ಪ್ರಪಂಚದಲ್ಲಿ ಸಮುದಾಯದ ಗರಿಷ್ಠ ಕಲ್ಯಾಣಸಾಧನೆಗೆ ಅವಶ್ಯಕವಾದ ಪರಿಸ್ಥಿತಿಗಳು ಇಲ್ಲದಿರುವುದನ್ನು ದೃಷ್ಟಾಂತ ಸಮೇತವಾಗಿ ವಿವರಿಸಿ, ಸರ್ಕಾರ ತನ್ನ ವಿತ್ತೀಯ ನೀತಿಯ ಮತ್ತು ಇತರ ಕ್ರಮಗಳ ಮೂಲಕ ಸಾಮಾಜಿಕ ಉತ್ಪಾದಕತೆ ಹಾಗೂ ವೈಯಕ್ತಿಕ ಉತ್ಪಾದಕತೆಗಳ ನಡುವಣ ವ್ಯತ್ಯಾಸವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಸಾಧ್ಯವೆಂಬುದನ್ನು ಪಿಗು ತೋರಿಸಿಕೊಟ್ಟಿದ್ದಾನೆ. ಉದಾಹರಣೆಗೆ, ಕೃಷಿಗೆ ಪ್ರೋತ್ಸಾಹಧನ ನೀಡಿಕೆಯನ್ನೂ ಮಾದಕ ದ್ರವ್ಯಗಳ ಉತ್ಪಾದನೆ ಹಾಗೂ ಮಾರಾಟದ ಮೇಲೆ ಹೆಚ್ಚಿನ ತೆರಿಗೆ ಹೇರಿಕೆಯನ್ನೂ ವಿತ್ತೀಯ ಕ್ರಮಗಳ ಮೂಲಕ ವರಮಾನ ಹೆಚ್ಚು ಫಲದಾಯಕವಾಗುವಂತೆ ಸಮಾಜದ ವಿವಿಧ ಪಂಗಡಗಳವರಲ್ಲಿ ವರಮಾನ ವರ್ಗಾವಣೆ ಏರ್ಪಡಿಸುವುದನ್ನೂ ಏಕಸ್ವಾಮ್ಯದ ನಿಯಂತ್ರಣವನ್ನೂ ಆತ ಸಮರ್ಥಿಸುತ್ತಾನೆ. ಹೀಗೆ ಆರ್ಥಿಕ ಕಲ್ಯಾಣವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಪಿಗು ರಚಿಸಿದ ಕೃತಿಯೂ ತರುವಾಯ ಆತ ಪ್ರಕಟಿಸಿದ ಸೋಷಿಯಲಿಸಂ ವರ್ಸಸ್ ಕ್ಯಾಪಿಟಲಿಸಂ ಎಂಬ ಗ್ರಂಥವೂ ಬಂಡವಾಳವಾದಿ ಮತ್ತು ಸಮಾಜವಾದಿ ವ್ಯವಸ್ಥೆಗಳ ಬಗ್ಗೆ ಕೇಂಬ್ರಿಜ್ ಪಂಥ ತಾಳಿರುವ ನಿಲುವನ್ನು ಪ್ರತಿನಿಧಿಸುತ್ತದೆಂದು ಹೇಳಬಹುದು.

	ಕೇಂಬ್ರಿಜ್ ಪಂಥಕ್ಕೆ ಆಧುನಿಕ ರೂಪ ಕೊಟ್ಟ ಜಾನ್ ಮೇನರ್ಡ್ ಕೇನ್ಸ್ ಆರ್ಥಿಕ ಮೀಮಾಂಸೆಯ ಪ್ರಪಂಚದಲ್ಲಿ ಒಬ್ಬ ಯುಗಪುರುಷನಾಗಿದ್ದಾನೆ. ಈತನ ಆರ್ಥಿಕ ಚಿಂತನೆಗಳು ಮೂಲತ: ಕೇಂಬ್ರಿಜ್ ಪರಂಪರೆಯ ವೈಚಾರಿಕ ಹಾಗೂ ಮಾನವ ಯೋಗಕ್ಷೇಮದ ದೃಷ್ಟಿಯನ್ನು ಪ್ರತಿಬಿಂಬಿಸುತ್ತವೆ. ಅಭಿಜಾತ ಪಂಥದ ನಿಲುವಿನ ದೋಷಗಳನ್ನು ತೋರಿಸಿ ಹೊಸ ಅರ್ಥಶಾಸ್ತ್ರಕ್ಕೆ ತಳಹದಿ ಹಾಕಿದ ಕೀರ್ತಿ ಕೇನ್ಸನ ಮೂಲಕ ಕೇಂಬ್ರಿಜ್ ಪಂಥಕ್ಕೆ ಸೇರಿದೆ ಎಂದು ಹೇಳಬಹುದು. ನಿರುಪಾಧಿಕ ಹಾಗೂ ಪರಿಪೂರ್ಣ ಸ್ಪರ್ಧೆ ಇರುವ ಬಂಡವಾಳ ವ್ಯವಸ್ಥೆಯಲ್ಲಿ ಸರಬರಾಯಿ ತನ್ನ ಬೇಡಿಕೆಯನ್ನು ತಾನೇ ಹುಟ್ಟಿಸಿಕೊಳ್ಳುವುದು ಎಂಬುದು ಜೆ.ಬಿ. ಸೇಯ ನಿಯಮ; ಆದ್ದರಿಂದ ಸಾರ್ವತ್ರಿಕ ಅತ್ಯುತ್ಪಾದನೆ ಹಾಗೂ ಅನೈಚ್ಛಿಕ ನಿರುದ್ಯೋಗಗಳು ಅಸಂಭವ; ಪೂರ್ಣೋದ್ಯೋಗ ಮಟ್ಟದಲ್ಲಿ ಮಾತ್ರ ಆರ್ಥಿಕತೆ ಸಮತೋಲದಲ್ಲಿರುತ್ತದೆ; ಮಾರುಕಟ್ಟೆಯ ಅಗೋಚರ ಶಕ್ತಿಗಳ ಕ್ರಿಯೆಯಿಂದ ಪೂರ್ಣೋದ್ಯೋಗದ ಸಮತೋಲಸ್ಥಿತಿಯನ್ನು ಆರ್ಥಿಕತೆ ಸ್ವಯಂನಿಯಂತ್ರಿತವಾಗಿ ತಲುಪುವುದು-ಎಂಬುದು ಆವರೆವಿಗೆ ಪ್ರಚಲಿತವಾಗಿದ್ದ ಅಭಿಜಾತಪಂಥದ ವಾದ. ಈ ವಾದ ದೋಷಯುತ ಎಂಬುದನ್ನು ಕೇನ್ಸ್ ತೋರಿಸಿದ. ಉದ್ಯೋಗ ಮತ್ತು ವರಮಾನಮಟ್ಟಗಳ ಮುಖ್ಯ ನಿರ್ಣಾಯಕ ಅಂಶಗಳ ಬಗ್ಗೆ ಕೇನ್ಸ್ ಹೊಸ ವಿವರಣೆ ನೀಡಿದ್ದಾನೆ. ಆತ ಸೃಜಿಸಿದ ಅನೇಕ ಪಾರಿಭಾಷಿಕ ಪದಗಳೂ ವಿಶ್ಲೇಷಣ ಮಾರ್ಗವೂ ಆಧುನಿಕ ಸಮಷ್ಟಿ ಅರ್ಥಶಾಸ್ತ್ರದ (ಮ್ಯಾಕ್ರೊ-ಎಕನಾಮಿಕ್ಸ್) ಮತ್ತು ಅಭ್ಯುದಯ ಅರ್ಥಶಾಸ್ತ್ರದ ಅಧ್ಯಯನಕ್ಕೆ ಮಾರ್ಗ ಮಾಡಿಕೊಟ್ಟಿವೆ. ಜೋನ್ ರಾಬಿನ್ಸನ್ ಈಚೆಗೆ ಪ್ರಕಟಿಸಿದ ಅಕ್ಯುಮುಲೇಷನ್ ಆಫ್ ಕ್ಯಾಪಿಟಲ್ ಎಂಬುದು ಅಭ್ಯುದಯ ಅರ್ಥಶಾಸ್ತ್ರಕ್ಕೆ ಕೇಂಬ್ರಿಜ್ ಪಂಥದ ಒಂದು ಮುಖ್ಯ ಕೊಡುಗೆಯಾಗಿದೆ.

	ಆರ್ಥಿಕ ಆವರ್ತಗಳ ಸಿದ್ಧಾಂತಗಳಿಗೆ ಕೇನ್ಸನ ಮೀಮಾಂಸೆ ಇನ್ನೊಂದು ಮುಖ್ಯವಾದ ಸಿದ್ಧಾಂತವನ್ನು ಸೇರಿಸಿತು. ಬಡ್ಡಿದರಕ್ಕೆ ಸಾಪೇಕ್ಷವಾಗಿ ಬಂಡವಾಳದ ಅಂಚಿನ ದಕ್ಷತೆಯಲ್ಲಿ ಆಗುವ ಏರಿಳಿತಗಳು ಆರ್ಥಿಕ ಚಕ್ರಗಳಿಗೆ ಮುಖ್ಯ ಕಾರಣವಾಗಿವೆ ಎಂಬುದಾಗಿ ಆತ ಹೇಳಿದ್ದಾನೆ. ಕೇನ್ಸನ ವಿಶ್ಲೇಷಣೆಯನ್ನೇ ಆಧಾರವಾಗಿಟ್ಟುಕೊಂಡು ರಾಬರ್ಟ್‍ಸನ್ ಉಳಿತಾಯ, ಹೂಟೆ ಇವುಗಳಲ್ಲಿ ಉಂಟಾಗುವ ಅಸಮತೋಲದಿಂದ ವಿಸ್ತರಣೆ ಮತ್ತು ಸಂಕೋಚಗಳು ಹೇಗೆ ಸಂಭವಿಸುವುವೆಂಬುದನ್ನು ವಿವರಿಸಿದ್ದಾನೆ. ಕೇಂಬ್ರಿಜ್ ಪಂಥದ ಈ ಸೈದ್ಧಾಂತಿಕ ಅಧ್ಯಯನಗಳು ಆಧುನಿಕ ಆರ್ಥಿಕ ಆವರ್ತ ನಿರೋಧಕ ನೀತಿಗಳಿಗೆ ಆಧಾರವಾಗಿವೆ. ಈ ಶತಮಾನದಲ್ಲಿ ವಿಕಾಸವಾಗಿ ಬಂದಿರುವ ಬಂಡವಾಳಶಾಹಿ ಪದ್ಧತಿಯಲ್ಲಿ ಪೂರ್ಣೋದ್ಯೋಗ ಹಾಗೂ ಸ್ತಿಮಿತತೆಯ ಪಾಲನೆಗೆ ಆರ್ಥಿಕ ಕ್ಷೇತ್ರದಲ್ಲಿ ನಿರ್ದಿಷ್ಟ ಸ್ವರೂಪದ ಹಾಗೂ ಗಾತ್ರದ ಸರ್ಕಾರಿ ಅಂತರಾಯಣ ಅವಶ್ಯಕ ಎಂಬ ಅಭಿಪ್ರಾಯವನ್ನು ಕೇನ್ಸ್ ಸಮರ್ಥಿಸಿದ್ದಾನೆ. ಎರಡನೆಯ ಮಹಾಯುದ್ಧದ ಅನಂತರದ ಕಾಲದ ವಿಶ್ವ ಹಣ ವ್ಯವಸ್ಥೆಯ ಪುನರ್ರಚನೆಯಲ್ಲಿ ಕೇನ್ಸನ ಪ್ರಭಾವ ಮಹತ್ತರವಾದ್ದಾಗಿತ್ತು.

	ಹೀಗೆ ಅರ್ಥಶಾಸ್ತ್ರದ ವಿವಿಧ ವಿಭಾಗಗಳ ಅಧ್ಯಯನದಲ್ಲಿ ಕೇಂಬ್ರಿಜ್ ಪಂಥ ಗಣನೀಯ ಪಾತ್ರವಹಿಸಿದೆ. ಈ ಪಂಥದ ನಿಲುವುಗಳಲ್ಲಿ ಸಂಕುಚಿತ ಮನೋಭಾವದ ಯಾವ ಮಡಿವಂತಿಕೆಯೂ ಇಲ್ಲ. ಹಳೆಯ ಸಿದ್ಧಾಂತಗಳ ಶಾಶ್ವತ ಮೌಲ್ಯಗಳೊಡನೆ ಹೊಸದಾಗಿ ಹುಟ್ಟಿಸಿದ ಅನೇಕ ಭಾವನೆಗಳನ್ನೂ ಸಿದ್ಧಾಂತಗಳನ್ನೂ ಮೇಳೈಸಿ, ಅರ್ಥಶಾಸ್ತ್ರದ ಸ್ಥಾನಮಾನ ಹೆಚ್ಚಿಸಲು ಅಪೂರ್ವ ಮೇಧಾವಿಗಳ ನೇತೃತ್ವದಲ್ಲಿ ಕೇಂಬ್ರಿಜ್ ಪಂಥ ಶ್ರಮಿಸುತ್ತ ಬಂದಿದೆ. ಅಲ್ಲದೆ ಬದಲಾಯಿಸುತ್ತಿರುವ ಪ್ರಪಂಚಕ್ಕೆ ಸಂದರ್ಭೋಚಿತವಾದ ಆರ್ಥಿಕ ರೀತಿನೀತಿಗಳ ಬಗ್ಗೆ ಉಪಯುಕ್ತವಾದ ಮಾರ್ಗದರ್ಶನವನ್ನೂ ನೀಡುತ್ತಿದೆ.    		
	(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ